ರಾಜ್ಯಪಾಲ -
ಭಾರತ ಗಣರಾಜ್ಯದ ಸಂವಿಧಾನದ ವಿಧಿಯಂತೆ ನೇಮಿಸಲ್ಪಡುವ ರಾಜ್ಯದ ವರಿಷ್ಠಾಧಿಪತಿ (ಗವರ್ನರ್). 1765ರಲ್ಲಿ ಮೊದಲಬಾರಿಗೆ ರಾಜ್ಯಪಾಲ ಹುದ್ದೆಯನ್ನು ಬ್ರಿಟಿಷರು ಸೃಷ್ಟಿಸಿ ಲಾರ್ಡ್ ಕ್ಲೈವ್‍ನನ್ನು ಬಂಗಾಲದ ಪ್ರಥಮ ರಾಜ್ಯಪಾಲನನ್ನಾಗಿ ನೇಮಿಸಿದರು. 1947 ಆಗಸ್ಟ್ 15ರಂದು ಭಾರತ ಸ್ವತಂತ್ರವಾದ ಮೇಲೆ ಈ ಹುದ್ದೆಯನ್ನು ಮುಂದುವರಿಸಲು ಭಾರತದ ಸಂವಿಧಾನ ರಚನಾ ಸಭೆಯ ಬಹುತೇಕ ಸದಸ್ಯರು ಸಮ್ಮತಿಸಿದ್ದರಿಂದ ರಾಜ್ಯಪಾಲ ಹುದ್ದೆಯನ್ನು ಮುಂದುವರೆಸಲಾಯಿತು. ಭಾರತದ ಒಕ್ಕೂಟ ಸರ್ಕಾರದಲ್ಲಿ ರಾಷ್ಟ್ರಪತಿ ಕೇಂದ್ರದಲ್ಲಿ ರಾಷ್ಟ್ರದ ಮುಖ್ಯಸ್ಥರಾಗಿರುವಂತೆ ರಾಜ್ಯಮಟ್ಟದಲ್ಲಿ ರಾಜ್ಯಪಾಲ ರಾಜ್ಯದ ಮುಖ್ಯಸ್ಥರಾಗಿರುತ್ತಾರೆ.

ನೇಮಕ : 1947ರ ಅನಂತರ ಭಾರತದ ಒಕ್ಕೂಟದಲ್ಲಿ ಸೇರಿದ ರಾಜ್ಯಗಳ ರಾಜರನ್ನು ಆಯಾ ರಾಜ್ಯದ ರಾಜಪ್ರಮುಖರೆಂದು ಮೊದಲು ನೇಮಿಸಲಾಗಿತ್ತು. ಸಂವಿಧಾನದ 153ನೆಯ ಪ್ರಕಾರ ಪ್ರತಿಯೊಂದು ರಾಜ್ಯದಲ್ಲೂ ರಾಜ್ಯಪಾಲರು ಇರುತ್ತಾರೆ. ಸಂವಿಧಾನದ ಏಳನೆಯ ತಿದ್ದುಪಡಿ ಅನ್ವಯ ಎರಡು ಅಥವಾ ಅನೇಕ ರಾಜ್ಯಗಳಿಗೆ ಸಂದರ್ಭಾನುಸಾರ ಬೇರೊಬ್ಬರನ್ನು ನೇಮಿಸುವವರೆಗೆ ಒಬ್ಬರನ್ನೇ ರಾಜ್ಯಪಾಲರನ್ನಾಗಿ ನೇಮಿಸಬಹುದು. 155ನೆಯ ವಿಧಿಯಂತೆ ರಾಜ್ಯಪಾಲರನ್ನು ರಾಷ್ಟ್ರಪತಿ ನೇಮಕಮಾಡುವರು. ಈ ರೀತಿ ನೇಮಕಮಾಡುವಾಗ ಕೇಂದ್ರಸರ್ಕಾರದ ಪ್ರಧಾನಮಂತ್ರಿಯ ಸಲಹೆಯನ್ನು ಗಮನಿಸಲಾಗುತ್ತದೆ. ರಾಜ್ಯ ಸರ್ಕಾರಕ್ಕೆ ಒಪ್ಪಿಗೆಯಾಗುವಂಥ ವ್ಯಕ್ತಿಯನ್ನು ನೇಮಿಸಬೇಕೆಂದು ಜವಾಹರಲಾಲ್ ನೆಹರು ಅವರು ಸಲಹೆ ನೀಡಿದ್ದರು. ಅದರಂತೆ ಅವರ ಆಡಳಿತ ಕಾಲದಲ್ಲಿ ರಾಜ್ಯ ಸರ್ಕಾರದ ಜೊತೆ ಸಮಾಲೋಚಿಸಿ ರಾಜ್ಯಪಾಲರನ್ನು ನೇಮಕಮಾಡುವ ಸಂಪ್ರದಾಯ ರೂಢಿಗೆ ತಂದರು. ಆದರೆ ಈ ಸಂಪ್ರದಾಯವನ್ನು 1967ರ ಅನಂತರ ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಅನುಸರಿಸುತ್ತಿಲ್ಲ. ರಾಜ್ಯಪಾಲರನ್ನು ನೇಮಿಸುವಾಗ ಬೇರೆ ರಾಜ್ಯದವರನ್ನು ನೇಮಿಸುವಂಥ ಸಂಪ್ರದಾಯವನ್ನು ಪಾಲಿಸಲಾಗುತ್ತದೆ.

ಅವಧಿ : 156ನೆಯ ವಿಧಿ ಅನ್ವಯ ರಾಜ್ಯಪಾಲರ ಅಧಿಕಾರಾವಧಿ ಐದು ವರ್ಷ, ಅವಧಿ ಮುಗಿದರೂ ತಮ್ಮ ಉತ್ತರಾಧಿಕಾರಿ ಅಧಿಕಾರ ವಹಿಸಿಕೊಳ್ಳುವವರೆಗೂ ಅಧಿಕಾರದಲ್ಲಿ ಮುಂದುವರೆಯಬಹುದು. ಕೆಲವೊಂದು ಕಾರಣಗಳಿಂದಾಗಿ ಅವಧಿ ಮುಗಿಯುವುದಕ್ಕೆ ಮುಂಚೆ ರಾಜ್ಯಪಾಲರು ತಾವೇ ಇಷ್ಟಪಟ್ಟು ಪದತ್ಯಾಗ ಮಾಡಬಹುದು ಅಥವಾ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ರಾಜೀನಾಮೆ ಪತ್ರವನ್ನು ಕೊಡಬಹುದು. ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ಸಲ್ಲಿಸಬೇಕು.

ಅರ್ಹತೆಗಳು : ರಾಜ್ಯಪಾಲ ಹುದ್ದೆಯ ಅಭ್ಯರ್ಥಿ ಭಾರತ ಸಂವಿಧಾನ 157 ನೆಯ ವಿಧಿಗೆ ಅನುಗುಣವಾಗಿ ಭಾರತದ ಪ್ರಜೆಯಾಗಿರಬೇಕು ಮತ್ತು 35 ವರ್ಷಗಳು ತುಂಬಿರಬೇಕು. ಅಭ್ಯರ್ಥಿ ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಸದಸ್ಯನಾಗಿದ್ದರೆ, ರಾಜ್ಯಪಾಲನಾಗಿ ಅಧಿಕಾರ ವಹಿಸಿಕೊಂಡ ಮೇಲೆ 158ನೆಯ ವಿಧಿಯ (1) ಹಾಗೂ (2) ನೆಯ ಉಪವಿಧಿಗಳಂತೆ ಸದಸ್ಯತ್ವ ರದ್ದಾಗುತ್ತದೆ. ಅಭ್ಯರ್ಥಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.

  	ರಾಜ್ಯಪಾಲರಾಗಿ ನೇಮಕಗೊಂಡವರು `ನನ್ನ ಶಕ್ತಿಗೆ ಅನುಗುಣವಾಗಿ ಸಂವಿಧಾನ ಮತ್ತು ಕಾನೂನನ್ನು ಕಾಪಾಡಿ, ಉಳಿಸಿ, ರಕ್ಷಿಸುತ್ತೇನೆಂದು ಮತ್ತು ಪ್ರಜೆಗಳ ಸೇವೆ ಹಾಗೂ ಯೋಗಕ್ಷೇಮ ಸಾಧನೆಗಾಗಿ ನಿರತನಾಗಿರುತ್ತೇನೆಂದು ರಾಜ್ಯದ ಮುಖ್ಯ ನ್ಯಾಯಧೀಶರಿಂದ ಪ್ರಮಾಣವಚನ ಸ್ವೀಕರಿಸುವರು.

  	ವೇತನ ಮತ್ತು ಸೌಲಭ್ಯಗಳು : ರಾಜ್ಯಪಾಲರಿಗೆ ಉಚಿತ ಅಧಿಕೃತ ನಿವಾಸವನ್ನು (ರಾಜಭವನ) ನೀಡಲಾಗುತ್ತದೆ. ಸಂಸತ್ತು ನಿಗಧಿಪಡಿಸುವ ವೇತನ ಮತ್ತು ಭತ್ಯೆಗಳನ್ನು ಕೊಡಲಾಗುತ್ತದೆ. ಸಂಸತ್ತು ನಿಗಧಿಪಡಿಸುವ ವೇತನ ಮತ್ತು ಭತ್ಯೆಗಳನ್ನು ಕೊಡಲಾಗುತ್ತದೆ. 1956ರ ಸಂವಿಧಾನದ ಏಳನೆಯ ತಿದ್ದುಪಡಿಯಂತೆ ರಾಜ್ಯಪಾಲರ ವೇತನ ಹಾಗೂ ಭತ್ಯೆಗಳನ್ನು ಅಧಿಕಾರದ ಅವಧಿಯಲ್ಲಿ ಮೊಟಕುಗೊಳಿಸಲಾಗುವುದು. ಎರಡು ಅಥವಾ ಹೆಚ್ಚು ರಾಜ್ಯಗಳಿಗೆ ಒಬ್ಬರೇ ರಾಜ್ಯಪಾಲರನ್ನಾಗಿ ನೇಮಿಸಿದಾಗ ಆತನ ವೇತನವನ್ನು ಸಂಬಂಧಪಟ್ಟ ರಾಜ್ಯಗಳು ಹೇಗೆ ಹಂಚಿಕೊಳ್ಳಬೇಕೆಂಬುದನ್ನು ರಾಷ್ಟ್ರಪತಿ ತೀರ್ಮಾನಿಸುವರು. ರಾಜ್ಯಪಾಲರಿಗೆ 1996 ಜನವರಿ 1 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ 36,000 ರೂಪಾಯಿ ವೇತನವನ್ನು ಸಂಸತ್ತು 1998 ರ ಆಗಸ್ಟ್ ನಲ್ಲಿ ಹೆಚ್ಚಿಸಿತು. ನಿವೃತ್ತಿಯಾದ ಮೇಲೆ ರಾಜ್ಯಪಾಲರು ಪಿಂಚಣಿ ಪಡೆಯಲು ಅವಕಾಶವಿಲ್ಲ. ಸಂವಿಧಾನದ 361 ನೆಯ ವಿಧಿ ಪ್ರಕಾರ ರಾಜ್ಯಪಾಲರಿಗೆ ಕೆಲವು ರಕ್ಷಣೆಗಳನ್ನು ನೀಡಲಾಗಿದೆ. ಇವರು ಚಲಾಯಿಸಿದ ಅಧಿಕಾರ ಮತ್ತು ನೀಡಿದ ತೀರ್ಮಾನಗಳನ್ನು ಹಾಗೂ ನಿರ್ವಹಿಸಿದ ಕರ್ತವ್ಯಗಳನ್ನು ಯಾವುದೇ ರೀತಿಯ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಇವರ ಅಧಿಕಾರ ಅವಧಿಯಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವಂತಿಲ್ಲ ಮತ್ತು ಬಂಧನದಲ್ಲಿಡುವಂತಿಲ್ಲ.

  	ಸಂವಿಧಾನಾತ್ಮಕವಾಗಿ ರಾಜ್ಯಪಾಲರು ರಾಜ್ಯದ ಕಾರ್ಯಾಂಗದ ಅಧಿಕಾರಗಳನ್ನು ಚಲಾಯಿಸುತ್ತಾರೆ. ಅಂದರೆ ಇವರು ನೇರವಾಗಿ ತಮ್ಮ ಅಧೀನದಲ್ಲಿರುವ ಅಧಿಕಾರಿಗಳ ಮೂಲಕ ಕಾರ್ಯಾಂಗದ ಅಧಿಕಾರಗಳನ್ನು ಚಲಾಯಿಸುವರು. ಸಂವಿಧಾನದ 166ನೆಯ ವಿಧಿ ಅನ್ವಯ ರಾಜ್ಯಸರ್ಕಾರದ ಎಲ್ಲ ಕಾರ್ಯಗಳ ನಿರ್ವಹಣೆ ಇವರ ನಾಮಾಂಕಿತದಲ್ಲಿ ನಡೆಯುತ್ತದೆ. ವಾಸ್ತವವಾಗಿ ಮಂತ್ರಿ ಮಂಡಲದ ಸಲಹೆ ಮೇರೆಗೆ ರಾಜ್ಯಪಾಲರು ಕೆಲಸ ಮಾಡುವುದರಿಂದ ಇವರು ನೈಜ ಕಾರ್ಯಾಂಗದ ಅಧಿಕಾರಿಗಳಲ್ಲವೆನ್ನಬಹುದು. ಸಂವಿಧಾನದ 163 ನೆಯ ವಿಧಿಯಂತೆ ಇವರಿಗೆ ಸಹಾಯ ಮಾಡಲು ಹಾಗೂ ಸಲಹೆ ನೀಡಲು ಮುಖ್ಯಮಂತ್ರಿ ನೇತೃತ್ವದ ಮಂತ್ರಿಮಂಡಲವಿರುತ್ತದೆ. ರಾಜ್ಯಪಾಲರು ಮುಖ್ಯಮಂತ್ರಿಯ ಸಲಹೆ ಮೇರೆಗೆ ಇತರ ಸಚಿವರನ್ನು ನೇಮಿಸುತ್ತಾರೆ. 165 ಮತ್ತು 316 ನೆಯ ವಿಧಿ ಪ್ರಕಾರ ಅಡ್ವೊಕೇಟ್ ಜನರಲ್ ಮತ್ತು ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸುತ್ತಾರೆ. ರಾಜ್ಯಪಾಲರ ಸಲಹೆ ಪಡೆದು ರಾಜ್ಯ ಮುಖ್ಯನ್ಯಾಯಾಧೀಶರನ್ನು ರಾಷ್ಟ್ರಪತಿ ನೇಮಿಸುತ್ತಾರೆ. ರಾಜ್ಯ ಆಡಳಿತ ಬಗ್ಗೆ ಮುಖ್ಯಮಂತ್ರಿಯಿಂದ ವಿಷಯ ತಿಳಿಯಲು ರಾಜ್ಯಪಾಲರಿಗೆ ಅಧಿಕಾರವಿದ್ದು ಮುಖ್ಯಮಂತ್ರಿಯೊಬ್ಬರು ವೈಯಕ್ತಿಕಯವಾಗಿ ತೆಗೆದುಕೊಂಡ ತೀರ್ಮಾನವನ್ನು ಸಚಿವ ಸಂಪುಟದಲ್ಲಿ ಚರ್ಚಿಸುವಂತೆ ಸಲಹೆ ನೀಡುವ ಅಧಿಕಾರವೂ ಇವರಿಗೆ ಇದೆ. ವಿಶೇಷ ಸಂದರ್ಭಗಳಲ್ಲಿ 356 ನೆಯ ವಿಧಿ ಅನ್ವಯ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಾಗ ರಾಜ್ಯಪಾಲರೇ ಆಡಳಿತ ನಡೆಸುತ್ತಾರೆ.

  	ರಾಜ್ಯಪಾಲರು ಶಾಸಕಾಂಗ ಸದಸ್ಯರಲ್ಲದಿದ್ದರೂ ಇದರ ಒಂದು ಅವಿಭಾಜ್ಯ ಅಂಗವೆಂಬುದು 168 ನೆಯ ವಿಧಿಯಿಂದ ಸ್ಪಷ್ಟವಾಗುತ್ತದೆ. ಇವರ ಮುಖ್ಯ ಶಾಸನೀಯ ಅಧಿಕಾರಗಳು ಹೀಗಿವೆ : ಶಾಸಕಾಂಗದ ಅಧಿವೇಶನವನ್ನು ಕರೆಯುವುದು, ಮುಂದೂಡುವುದು ಹಾಗೂ ವಿಸರ್ಜಿಸುವುದು ; ಶಾಸಕಾಂಗದಲ್ಲಿ ಭಾಷಣ ಮಾಡುವುದು ಹಾಗೂ ಸಂದೇಶಗಳನ್ನು ಶಾಸಕಾಂಗಕ್ಕೆ ಕಳುಹಿಸುವುದು ; ಚುನಾವಣೆಯ ಅನಂತರ ಅಸ್ತಿತ್ವಕ್ಕೆ ಬಂದ ಹೊಸ ವಿಧಾನಸಭೆಯಲ್ಲಿ ವಿಶೇಷ ಭಾಷಣ ಮಾಡುವುದು; ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ತಮ್ಮ ಅಂಕಿತ ನೀಡುವುದು ಮತ್ತು ವಿವಾದಾತ್ಮಕ ಮಸೂದೆಗಳನ್ನು ರಾಷ್ಟ್ರಪತಿಯ ತೀರ್ಮಾನಕ್ಕೆ ಕಾಯ್ದಿರಿಸುವುದು, ವಿಧಾನ ಸಭೆಯಲ್ಲಿ ಆಂಗ್ಲೊ-ಇಂಡಿಯನ್ ಜನಾಂಗಕ್ಕೆ ಪ್ರಾತಿನಿಧ್ಯ ನೀಡಲು ಆ ಜನಾಂಗದ ಒಬ್ಬರನ್ನು ನಾಮಕರಣ ಮಾಡುವುದು; ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ ಚಳುವಳಿ ಮತ್ತು ಸಾಮಾಜಿಕ ಸೇವೆಗಳಲ್ಲಿ ಪರಿಣತಿ ಅಥವಾ ವಾಸ್ತವಿಕ ಅನುಭವವನ್ನು ಪಡೆದ ಕೆಲವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡುವುದು ಹಾಗೂ ರಾಜ್ಯ ಲೋಕಸೇವಾ ಆಯೋಗದ ವಾರ್ಷಿಕ ವರದಿಯನ್ನು ಶಾಸನ ಸಭೆಯಲ್ಲಿ ಮಂಡಿಸುವಂತೆ ಕ್ರಮ ತೆಗೆದುಕೊಳ್ಳುವುದು ಇತ್ಯಾದಿ ಶಾಸಕಾಂಗ ಅಧಿಕಾರಗಳನ್ನು ಮಂತ್ರಿಮಂಡಲದ ಸಲಹೆ ಮೇರೆಗೆ ರಾಜ್ಯಪಾಲರು ಚಲಾಯಿಸುತ್ತಾರೆ. ರಾಜ್ಯ ಶಾಸಕರ ಅನರ್ಹತೆ ಬಗ್ಗೆ ವಿವಾದಗಳುಂಟಾದರೆ ಅವುಗಳ ವಿಷಯದಲ್ಲಿ ರಾಜ್ಯಪಾಲರು ಅಂತಿಮ ತೀರ್ಮಾನ ತೆಗೆದುಕೊಳ್ಳುವಾಗ ಚುನಾವಣಾ ಆಯೋಗದ ಸಲಹೆಯನ್ನು ಪಡೆಯುವರು.

  	ರಾಜ್ಯದ ಅರ್ಥಿಕ ವಿಚಾರದಲ್ಲಿ ವಾಸ್ತವವಾಗಿ ಅರ್ಥಸಚಿವರನ್ನು ವಿಧಾನಸಭೆಯಲ್ಲಿ ರಾಜ್ಯದ ಆಯವ್ಯಯ ಪತ್ರ ಮಂಡಿಸಿದರೂ ಕ್ರಮವನ್ನು ಕೈಗೊಳ್ಳಬಹುದೆಂದು 202 ನೆಯ ವಿಧಿ ತಿಳಿಸುತ್ತದೆ ಮತ್ತು 203 ನೆಯ ವಿಧಿ ಅನ್ವಯ ರಾಜ್ಯಪಾಲರ ಒಪ್ಪಿಗೆಯಿಲ್ಲದೆ ಹಣಕಾಸು ಮಸೂದೆಯನ್ನು ಶಾಸಕಾಂಗದಲ್ಲಿ ಮಂಡಿಸುವಂತಿಲ್ಲ ಅಥವಾ ತಿದ್ದುಪಡಿ ಮಾಡುವಂತಿಲ್ಲ. ರಾಜ್ಯದ `ಆಕಸ್ಮಿಕ ನಿಧಿ ಯಿಂದ ತುರ್ತು ಸಮಯದಲ್ಲಿ ಹಣ ಖರ್ಚು ಮಾಡುವಂತೆ ಸರ್ಕಾರಕ್ಕೆ ತಮ್ಮ ಅನುಮತಿ ನೀಡಿ ಅನಂತರ ಶಾಸಕಾಂಗ ಅಧಿವೇಶನ ಸೇರಿದಾಗ ಅದರ ಒಪ್ಪಿಗೆಯನ್ನು ಪಡೆಯಬಹುದಾಗಿದೆ.

  	ಸಂವಿಧಾನದ 161 ನೆಯ ವಿಧಿ ಪ್ರಕಾರ ರಾಜ್ಯಪಾಲರು ರಾಜ್ಯದೊಳಗೆ ಯಾವುದೇ ಬಗೆಯ ಅಪರಾಧಕ್ಕೆ ಶಿಕ್ಷೆಗೆ ಗುರಿಯಾದವರಿಗೆ ಕ್ಷಮಾಪಣೆ ನೀಡುವ, ಶಿಕ್ಷೆಯನ್ನು ಮುಂದೆ ಹಾಕುವ ಅಥವಾ ಬೇರೆ ಶಿಕ್ಷೆಗೆ ಪರಿವರ್ತಿಸುವ ಅಧಿಕಾರಗಳನ್ನು ಪಡೆದಿದ್ದಾರೆ. ಮರಣದಂಡನೆಯನ್ನು ರದ್ದುಗೊಳಿಸುವ ಅಧಿಕಾರ ಇವರಿಗೆ ಇಲ್ಲದಿದ್ದರೂ ಕೆಲವು ಸಂದರ್ಭಗಳಲ್ಲಿ ಅದನ್ನು ತಾತ್ಕಾಲಿಕವಾಗಿ ತಡೆಯುವ ಅಥವಾ ಬೇರೆ ಶಿಕ್ಷೆಗೆ ಪರಿವರ್ತಿಸುವ ಅಧಿಕಾರವನ್ನು ದಂಡ ಸಂಹಿತೆ 54 ನೆಯ ವಿಧಿಯಂತೆ ಹಾಗೂ ಕ್ರಿಮಿನಲ್ ಪ್ರೊಸೀಜರ್ ಕೋಡಿನ ಸೆಕ್ಷನ್ 432 ಮತ್ತು 433ರ ಅನ್ವಯ ಚಲಾಯಿಸಬಹುದೆಂದು ಸಂವಿಧಾನತಜ್ಞ ದುರ್ಗಾದಾಸ್ ಬಸು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ, ರಾಜ್ಯದ ಮುಖ್ಯನ್ಯಾಯಾಲಯದೊಡನೆ ಸಮಾಲೋಚಿಸಿ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮತ್ತು ಬಡ್ತಿ ನೀಡುವ ಅಧಿಕಾರ ಇವರಿಗೆ ಇದೆ. ನಿಯಮಗಳಿಗೆ ಅನುಸಾರವಾಗಿ ರಾಜ್ಯದ ನ್ಯಾಯಾಂಗ ಸೇವೆಗೆ ನ್ಯಾಯಾಂಗ ಅಧಿಕಾರಿಗಳನ್ನು ಇವರು ನೇಮಿಸುತ್ತಾರೆ.

  	ರಾಜ್ಯಪಾಲರು ಸಚಿವ ಸಂಪುಟದ ಸಲಹೆ ಇಲ್ಲದೆ ಚಲಾಯಿಸುವ ಅಧಿಕಾರಗಳನ್ನು ರಾಜ್ಯಪಾಲರ ವಿವೇಚನಾ ಅಧಿಕಾರಗಳೆಂದು ಕರೆಯಲಾಗಿದೆ. ಸಂವಿಧಾನದ ಕೆಲವು ವಿಧಿಗಳಿಗೆ ಹಾಗೂ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ವಿವೇಚನಾ ಅಧಿಕಾರಗಳನ್ನು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಇವರು ಚಲಾಯಿಸಬಹುದು. ಅವುಗಳೆಂದರೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಅಥವಾ ವಿವಿಧ ಪಕ್ಷಗಳ ಸಂಯುಕ್ತ ರಂಗಕ್ಕೆ ಬಹುಮತ ದೊರೆಯದೇ ಇದ್ದಾಗ ರಾಜ್ಯಪಾಲರು ತಮ್ಮ ವಿವೇಚನೆಗೆ ಅನುಗುಣವಾಗಿ ಸ್ಥಿರ ಸರ್ಕಾರ ರಚಿಸಬಲ್ಲ ಯಾವುದಾದರೂ ಪಕ್ಷದ ಮುಖಂಡರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಬಹುದು. ಸಾಮಾನ್ಯವಾಗಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷದ ನಾಯಕನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಿಸುವುದು ಸಾಮಾನ್ಯ. ಕೆಲವು ರಾಜ್ಯಗಳಲ್ಲಿ ವಿವಿಧ ಪಕ್ಷಗಳ ಸಮ್ಮಿಶ್ರ ಸರ್ಕಾರದ ರಚನೆಗೂ ಅವಕಾಶ ಕಲ್ಪಿಸುವುದು ಕಂಡು ಬಂದಿದೆ. ಇಂತಹ ಸರ್ಕಾರಗಳು ನಿರ್ದಿಷ್ಟ ಅವಧಿಯೊಳಗೆ ಬಹುಮತ ಸಾಬಿತು ಮಾಡುವಂತೆ ರಾಜ್ಯಪಾಲರು ಸೂಚಿಸಬಹುದು; ಒಂದು ವೇಳೆ ಮುಖ್ಯಮಂತ್ರಿ ಹಠಾತ್ ನಿಧನನಾದರೆ ಆಡಳಿತ ಪಕ್ಷ ತನ್ನ ಹೊಸ ನಾಯಕನನ್ನು ಆಯ್ಕೆ ಮಾಡುವವರಿಗೆ ಹಂಗಾಮಿ ಮುಖ್ಯಮಂತ್ರಿಯನ್ನು ರಾಜ್ಯಪಾಲರು ನೇಮಿಸಬಹುದು.

  	ರಾಜ್ಯಪಾಲರು ಮೂರು ಕಾರಣಗಳಿಂದ ಮಂತ್ರಿಮಂಡಲವನ್ನು ವಜಾ ಮಾಡಬಹುದು. ಅವುಗಳೆಂದರೆ : ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡಾಗ, ಮಂತ್ರಿಮಂಡಲ ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ನಡೆಸಿದಾಗ ಮತ್ತು ಮುಖ್ಯಮಂತ್ರಿ ಬಹುಮತವನ್ನು ಕಳೆದುಕೊಂಡ ಅನಂತರವೂ ಅಧಿಕಾರವನ್ನು ತ್ಯಜಿಸದೇ ಇದ್ದಾಗ.

  	ಸಂವಿಧಾನದ 356 ನೆಯ ವಿಧಿ ಪ್ರಕಾರ ರಾಜ್ಯಪಾಲರು ತಮ್ಮ ವಿವೇಚನೆಯ ಅನುಸಾರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರಲು ಸೂಚಿಸಿದಾಗ ವಿಧಾನಸಭೆಯ ವಿಸರ್ಜನೆಗೂ ಸಲಹೆ ಮಾಡಬಹುದು. ಈ ವಿಧಿ ಅನ್ವಯ ವಿಧಾನಸಭೆಯನ್ನು ವಿಸರ್ಜಿಸುವಾಗ ಎಲ್ಲ ರಾಜ್ಯಗಳ ರಾಜ್ಯಪಾಲರು ಒಂದೇ ರೀತಿಯಲ್ಲಿ ನಡೆದುಕೊಂಡಿಲ್ಲ. ಆಯಾ ರಾಜ್ಯದ ಸನ್ನಿವೇಶಕ್ಕೆ ಅನುಗುಣವಾಗಿ ವರ್ತಿಸಿದ್ದಾರೆ. ಅದರಂತೆ ಕೆಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಘೋಷಿಸಿದ ಮೇಲೆ ವಿಧಾನ ಸಭೆಗಳನ್ನು ವಿಸರ್ಜಿಸಲಾಗಿದೆ. ಮತ್ತೆ ಕೆಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಘೋಷಿಸಿದ್ದರೂ ವಿಧಾನಸಭೆಯನ್ನು ವಿಸರ್ಜಿಸದೆ ಅಮಾನತ್ತಿನಲ್ಲಿಡಲಾಗಿದೆ. ಸದನವನ್ನು ಅಮಾನತ್ತಿನಲ್ಲಿಟ್ಟಾಗ ಮತ್ತೆ ಜನಪ್ರಿಯ ಸರ್ಕಾರದ ರಚನೆಗೆ ಅವಕಾಶ ಇರುತ್ತದೆ. ಸಂವಿಧಾನದ 356 ನೆಯ ವಿಧಿ ಅನ್ವಯ ರಾಜ್ಯ ಸರ್ಕಾರವನ್ನು ವಜಾ ಮಾಡಲು ಅವಕಾಶವಿರುವುದರಿಂದ ರಾಜ್ಯಪಾಲರು ಎಚ್ಚರಿಕೆಯಿಂದ ತಮ್ಮ ವಿವೇಚನಾಧಿಕಾರವನ್ನು ಚಲಾಯಿಸುವರು. ಕೆಲವು ರಾಜ್ಯಗಳ ರಾಜ್ಯಪಾಲರು ಈ ವಿಧಿಯ ದುರ್ಬಳಕೆಯನ್ನು ತಡೆದಿರುವುದೂ ಉಂಟು.

  	ರಕ್ಷಣೆ ಹಾಗೂ ಆಡಳಿತ ಭದ್ರತೆ ಮತ್ತು ಪ್ರಜಾರಕ್ಷಣೆ ಇವುಗಳನ್ನು ಕುರಿತಂತೆ ಭಾರತದ ಕೆಲವು ರಾಜ್ಯಗಳ ವಿಶೇಷ ಪರಿಸ್ಥಿತಿಯಿಂದಾಗಿ ಅಲ್ಲಿಯ ರಾಜ್ಯಪಾಲರಿಗೆ ಕೆಲವು ವಿಶೇಷ ಹೊಣೆಗಾರಿಕೆಗಳನ್ನು ನೀಡಲಾಗಿದೆ. ಉದಾಹರಣೆಗೆ- ಕಾನೂನು ಮತ್ತು ಶಿಸ್ತು ಪರಿಪಾಲನೆಯಲ್ಲಿ ನಾಗಾಲ್ಯಾಂಡಿನ ರಾಜ್ಯಪಾಲರು (371 ಎ ವಿಧಿ); ಗುಡ್ಡ ಪ್ರದೇಶಗಳಿಂದ ಆಯ್ಕೆಯಾದ ಸದಸ್ಯರನ್ನು ಒಳಗೊಂಡಿರುವ ವಿಧಾನಸಭೆಯ ಸಮಿತಿ ಸರಿಯಾಗಿ ಕೆಲಸ ಮಾಡುವಂತೆ ಮೇಲ್ವಿಚಾರಣೆ ಮಾಡಲು ಮಣಿಪುರದ ರಾಜ್ಯಪಾಲರು (371 ಸಿ ವಿಧಿ); ಸಿಕ್ಕಿಂ ರಾಜ್ಯದ ಶಾಂತಿ ಮತ್ತು ವಿವಿಧ ಜನಾಂಗಗಳ ಸಾಮಾಜಿಕ ಹಾಗೂ ಆರ್ಥಿಕ ಬೆಳೆವಣಿಗೆಗೆ ಈ ರಾಜ್ಯದ ರಾಜ್ಯಪಲರು (371 ಎಫ್ ವಿಧಿ) ಮತ್ತು ಕಾನೂನು ಹಾಗೂ ಶಿಸ್ತಿನ ಪರಿಪಾಲನೆ ಬಗ್ಗೆ ಅರುಣಾಚಲ ಪ್ರದೇಶದ ರಾಜ್ಯಪಾಲರು (371 ಎಚ್ ವಿಧಿ) ವಿಶೇಷ ಜವಾಬ್ದಾರಿಗಳನ್ನು ಹೊಂದಿದ್ದಾರೆ.

  	ರಾಜ್ಯಪಾಲರು ಚಲಾಯಿಸಿದ ಅಧಿಕಾರಗಳು ಹಾಗೂ ಅವರ ಪಾತ್ರ 1967 ರ ವರೆಗೆ ವಿವಾದಕ್ಕೆ ಒಳಗಾಗಲಿಲ್ಲ. ಏಕೆಂದರೆ ಕೇಂದ್ರ ಮತ್ತು ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು; ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ಸಿಗರೇ ರಾಜ್ಯಪಾಲರಾಗಿ ನೇಮಕವಾದ್ದರಿಂದ ವಿವಾದಗಳು ಉಂಟಾಗಲಿಲ್ಲ. ಆದರೆ 1967ರ ಬಳಿಕ ಕಾಂಗ್ರೆಸ್ಸಿಗೆ ಏಕಸ್ವಾಮ್ಯತೆ ಕುಂಠಿತಗೊಂಡು ಕಾಂಗ್ರೆಸ್ಸೇತರ ಸರ್ಕಾರಗಳು ಕೆಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಲ್ಲಿಯ ರಾಜ್ಯಪಾಲರನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಪ್ರಯತ್ನಸಿದುಂಟು. ಪರಿಣಾಮವಾಗಿ ರಾಜ್ಯಪಾಲ ಪದವಿಯನ್ನು ರದ್ದುಗೊಳಿಸಬೇಕೆಂದು ಕೆಲವು ಮುಖಂಡರು ವಾದಿಸಿದರು. ರಾಜ್ಯಪಾಲ ಹುದ್ದೆ ಕೇವಲ ನಾಮಮಾತ್ರ ಹಾಗೂ ಅಲಂಕಾರಿಕ ಆದ್ದರಿಂದ ಇದರ ಅಗತ್ಯವಿಲ್ಲ ಎನ್ನುವುದು ಕೆಲವರ ವಾದ. ಹಾಗೆಯೇ ರಾಜ್ಯಪಾಲ ಪದವಿಯನ್ನು ರಾಜಕೀಯ ಕಾರಣಗಳಿಗಾಗಿ ದುರುಪಯೋಗ ಮಾಡಿಕೊಳ್ಳಲು ಸಾಧ್ಯವಿದ್ದರೂ ಈ ಹುದ್ದೆಯನ್ನು ರದ್ದುಪಡಿಸಬಾರದೆಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ರಾಜ್ಯದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಪರಸ್ಪರ ಸಹಕರಿಸಿ, ರಾಜ್ಯದ ಅಭ್ಯುದಯಕ್ಕೆ ಮತ್ತು ಸರ್ಕಾರದ ಸ್ಥಿರತೆಗೆ ಶ್ರಮಿಸುವುದು ಅಗತ್ಯ. ರಾಜ್ಯಪಾಲರು ತಮ್ಮ ಸಚಿವ ಸಂಪುಟದ ಸ್ನೇಹಿತರು, ತತ್ತ್ವಜ್ಞಾನಿ ಹಾಗೂ ಮಾರ್ಗದರ್ಶಕರು ಎಂದು ಸರ್ಕಾರಿಯಾ ಆಯೋಗ ಹೇಳಿರುವುದರಲ್ಲಿ ಸತ್ವವಿದೆ. ಈ ಆಯೋಗ ಶಿಫಾರಸ್ಸು ಮಾಡಿರುವಂತೆ ಜೀವನದ ಯಾವುದಾದರೂ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದಿರುವವರನ್ನು ರಾಜ್ಯದ ರಾಜಕೀಯದಿಂದ ದೂರವಿರುವವರನ್ನು ಮತ್ತು ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸದೇ ಇರುವವರನ್ನು ರಾಜ್ಯಪಾಲರನ್ನಾಗಿ ನೇಮಿಸಿದರೆ ಈ ಪದವಿಗೆ ಮತ್ತಷ್ಟು ಘನತೆ ಹಾಗೂ ಗೌರವ ಉಂಟಾಗುತ್ತದೆ. ಅಲ್ಲದೆ ಎಚ್.ಎಂ. ಸೀರ್‍ವಾಯ್ ಸಲಹೆ ಮಾಡಿರುವ `ನಿರ್ದಿಷ್ಟ ಅವಧಿ ಪದ್ಧತಿಯನ್ನು ಅಳವಡಿಸಿಕೊಂಡರೆ ರಾಜ್ಯಪಾಲರು ಸ್ವತಂತ್ರವಾಗಿ ನಿಷ್ಪಕ್ಷಪಾತವಾಗಿ ತಮ್ಮ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ರಾಜ್ಯಪಾಲರು ಸಂವಿಧಾನವನ್ನು ಉಲ್ಲಂಘಿಸಿ ನಡೆದರೆ ಇವರ ಪದಚ್ಯುತಿಗೆ ಸಂವಿಧಾನದಲ್ಲಿ ನಿಯಮವನ್ನು ಅಳವಡಿಸಬಹುದಾಗಿದೆ.
							               (ಎಚ್.ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ